ಸೋಮವಾರ, ಫೆಬ್ರವರಿ 25, 2008

ಲಕ್ಕುಂಡಿಯ ಶಿಲ್ಪ ಕಲಾ ವೈಭವ


ಲಕ್ಕುಂಡಿ ಗ್ರಾಮದೊಳಗೆ ತಿರುಗಾಡಿದರೆ ಹಿಂದಿನ ಭವ್ಯ ಇತಿಹಾಸದ ಕುರುಹುಗಳನ್ನು ಕಾಣಬಹುದು. ಇದೊಂದು ದೇವಾಲಯಗಳ ಮತ್ತು ಬಾವಿಗಳ ಊರಾಗಿತ್ತು. ಇಲ್ಲಿನ ಕೋಟೆ ೩ ಸುತ್ತಿನದಾಗಿತ್ತು. ಈಗ ಕೋಟೆಯ ೩ ಸುತ್ತುಗಳ ಗೋಡೆಯನ್ನೇ ಮನೆಗಳ ನೆಲಗಟ್ಟನ್ನಾಗಿ ಅಥವಾ ಗೋಡೆಗಳನ್ನಾಗಿ ಬಳಸಲಾಗಿದೆ. ಊರೊಳಗೆ ಸುತ್ತಾಡುವಾಗ ಆಚೀಚೆ ದೃಷ್ಟಿ ಹಾಯಿಸಿದರೆ ಕೋಟೆಯ ಗೋಡೆಗಳ ನೆಲಗಟ್ಟು ಸ್ಪಷ್ಟವಾಗಿ ಕಾಣಸಿಗುವುದು. ಕೋಟೆಯೊಳಗಿನ ಕಂದಕಗಳು ಈಗ ಮಳೆಗಾಲದ ನೀರನ್ನು ಹಾಯಿಸುವ ಮೋರಿಗಳಾಗಿವೆ. ಕಲ್ಯಾಣ ಚಾಳುಕ್ಯರು ಲಕ್ಕುಂಡಿಯ ಹೆಚ್ಚಿನ ದೇವಾಲಯಗಳನ್ನು ಕಟ್ಟಿಸಿದರು ಎನ್ನಲಾಗುತ್ತದೆ. ಈ ದೇವಾಲಯಗಳು ೧೦೮೭ರಲ್ಲಿ ಚೋಳರ ದಾಳಿಯಲ್ಲಿ ಹಾನಿಗೊಳಗಾದಾಗ, ಲಕ್ಕುಂಡಿಯನ್ನು ನಂತರ ಆಳಿದವರು ಹಾನಿಗೊಳಗಾದ ದೇವಾಲಯಗಳನ್ನು ಸರಿಪಡಿಸಿದರು.


ಒಂದೇ ಪ್ರಾಂಗಣದೊಳಗೆ ಮಣಕೇಶ್ವರ ದೇವಾಲಯ ಮತ್ತು ಮುಸುಕಿನ ಬಾವಿ ಇವೆ. ಹಿಂದೆ ಗಿಡ ಮರಗಳಿಂದ ಸುತ್ತುವರಿದು ಮುಸುಕು ಹಾಕಿದಂತೆ ಇದ್ದಿದ್ದರಿಂದ ಮುಸುಕಿನ ಬಾವಿ ಎಂಬ ಹೆಸರು. ಈ ಬಾವಿಯ ಸೌಂದರ್ಯವನ್ನು ಕಣ್ಣಾರೆ ಕಂಡು ಆನಂದಿಸಬೇಕು. ನಾವು ತೆರಳಿದಾಗ ಮುಸುಕಿನ ಬಾವಿ ನೀರಿನಿಂದ ತುಂಬಿತ್ತು. ಎಪ್ರಿಲ್-ಮೇ ತಿಂಗಳಲ್ಲಿ ತೆರಳಿದರೆ ನೀರು ಕಡಿಮೆಯಾಗಿ, ಬಾವಿಯ ಭವ್ಯ ರಚನೆಯನ್ನು ಕಾಣಬಹುದು. ನೀರು ಕಡಿಮೆಯಿರುವಾಗ ಮುಸುಕಿನ ಬಾವಿಯ ಚಿತ್ರಗಳನ್ನು ಶಾಂತಕುಮಾರ್ ಎಂಬವರು ಇಲ್ಲಿ ಹಾಕಿದ್ದಾರೆ, ನೋಡಿ. ಒಂದು ಸಾವಿರ ವರ್ಷ ಹಳೆಯದಾದ ಈ ಬಾವಿ ಇಂದಿಗೂ ತನ್ನ ಸೌಂದರ್ಯವನ್ನು ಉಳಿಸಿಕೊಂಡಿರುವುದು ಸೋಜಿಗವೆನಿಸುತ್ತದೆ. ಲಕ್ಕುಂಡಿಯ ಬಾವಿಗಳ ಪೈಕಿ ಸುಂದರವಾಗಿದ್ದು, ನೋಡಲು ಯೋಗ್ಯವಾಗಿರುವುದೆಂದರೆ ಮುಸುಕಿನ ಬಾವಿ ಮಾತ್ರ.


ಮುಸುಕಿನ ಬಾವಿಗೆ ತಾಗಿಕೊಂಡೇ ಮಣಕೇಶ್ವರ ದೇವಾಲಯವಿದೆ. ಈ ದೇವಾಲಯ ೩ ಗರ್ಭಗುಡಿಗಳನ್ನು ಹೊಂದಿದ್ದು, ಮುಖ್ಯ ಗರ್ಭಗುಡಿಯಲ್ಲಿ ಮಾತ್ರ ಶಿವಲಿಂಗವಿದೆ. ಎಡ ಮತ್ತು ಬಲದಲ್ಲಿರುವ ಗರ್ಭಗುಡಿಗಳಲ್ಲಿ ಏನೂ ಇಲ್ಲ.


ಅತ್ತಿಮಬ್ಬೆಯು ೧೫೦೦ ಜೈನ ಬಸದಿಗಳನ್ನು ನಿರ್ಮಿಸಿರುವಳು ಎಂದು ಇತಿಹಾಸದಲ್ಲಿ ಹೇಳಲಾಗಿದೆ. ಇವೆಲ್ಲಾ ಎಲ್ಲೆಲ್ಲಿ ಇವೆ ಎಂಬ ಬಗ್ಗೆ ಹೆಚ್ಚಿನ ದಾಖಲೆಗಳಿಲ್ಲ. ಲಕ್ಕುಂಡಿಯಲ್ಲಿರುವುದು ಆಕೆ ಕಟ್ಟಿಸಿದ ೧೫೦೧ನೇ ಜೈನ ಬಸದಿ. ಗರ್ಭಗುಡಿಯಲ್ಲಿ ಕರಿಕಲ್ಲಿನ ಮಹಾವೀರನ ವಿಗ್ರಹವಿದೆ. ಈ ಜಿನಾಲಯವನ್ನು ಕಲ್ಯಾಣ ಚಾಲುಕ್ಯರ ಶಿಲ್ಪಕಲಾ ಶೈಲಿಯಲ್ಲಿ ಕಟ್ಟಲಾಗಿದೆ. ಜಿನಾಲಯದ ಬಲಗಡೆ ರುಂಡವಿಲ್ಲದ ತೀರ್ಥಂಕರನ ಕಲ್ಲಿನ ಮೂರ್ತಿಯೊಂದು ಧ್ಯಾನಕ್ಕೆ ಕುಳಿತಿರುವ ರೂಪದಲ್ಲಿದೆ.

ಇಲ್ಲಿ ನಮ್ಮ ಭೇಟಿಯಾದದ್ದು ಮುತ್ತಪ್ಪ ಮುಸುಕಿನಬಾವಿ ಎಂಬ ಸಜ್ಜನರೊಂದಿಗೆ. ಇವರನ್ನು ನಮ್ಮನ್ನು ಉಳಿದ ಎಲ್ಲಾ ದೇವಾಲಯಗಳನ್ನು ತೋರಿಸುವಂತೆ ವಿನಂತಿಸಿದೆ. ನಂತರ ನಾವು ತೆರಳಿದ್ದು ಜಿನಾಲಯಕ್ಕೆ ಸಮೀಪದಲ್ಲೇ ಇರುವ ನಾಗನಾಥ ದೇವಾಲಯಕ್ಕೆ. ಸಣ್ಣ ಶಿವಲಿಂಗದ ಹಿಂದೆ ಶಿವಲಿಂಗದ ನಾಲ್ಕು ಪಟ್ಟು ದೊಡ್ಡದಿರುವ ನಾಗನ ರಚನೆ.

ಲಕ್ಕುಂಡಿ ಕೆರೆಯ ತಟದಲ್ಲಿರುವುದು ಹಾಲುಗುಂದ ಬಸವೇಶ್ವರ ದೇವಾಲಯ. ಈ ದೇವಾಲಯದೊಳಗೆ ಕಾಲಿಟ್ಟೊಡನೆ ಕಂಡುಬರುವುದು ಬೃಹದಾಕಾರದ ನಂದಿ ವಿಗ್ರಹ. ಬಲಕ್ಕೆ ಇರುವ ಗರ್ಭಗುಡಿಯಲ್ಲಿನ ಶಿವಲಿಂಗಕ್ಕೆ ಮುಖ ಮಾಡಿ ಈ ನಂದಿಯನ್ನು ಕೂರಿಸಲಾಗಿದೆ. ಎಡಕ್ಕೆ ಮತ್ತು ನೇರಕ್ಕೆ ಇರುವ ಗರ್ಭಗುಡಿಗಳಲ್ಲೂ ಶಿವಲಿಂಗಗಳಿವೆ. ಒಂದೇ ದೇವಸ್ಥಾನ. ೩ ಗರ್ಭಗುಡಿಗಳು. ಹಾಲುಗುಂದ ಬಸವೇಶ್ವರ ದೇವಸ್ಥಾನದ ಪ್ರಾಂಗಣಕ್ಕೆ ತಾಗಿಕೊಂಡೇ ಇರುವುದು 'ಮಜ್ಜಲ ಬಾವಿ'. ಈ ಬಾವಿಯ ನೀರು ಋತುಮಾನಗಳಿಗೆ ಅನುಗುಣವಾಗಿ ತನ್ನ ಬಣ್ಣವನ್ನು ಬದಲಾಯಿಸುತ್ತದೆ ಎಂಬ ಪ್ರತೀತಿ. ನಾವು ತೆರಳಿದಾಗ ಬಾವಿಯ ನೀರು ಕಪ್ಪು ಬಣ್ಣದಾಗಿತ್ತು. ಕೆಂಪು ಹಾಗೂ ನೀಲಿ ಬಣ್ಣಗಳಿಗೆ ಈ ಬಾವಿಯ ನೀರು ಬದಲಾಗುತ್ತದೆ ಎಂದು ಮುತ್ತಪ್ಪ ತಿಳಿಸಿದರು.


ಸಮೀಪದಲ್ಲೇ ಇರುವುದು ನನೇಶ್ವರ ದೇವಸ್ಥಾನ ಹಾಗೂ ಕಾಶಿ ವಿಶ್ವೇಶ್ವರ ದೇವಾಲಯ.ನನೇಶ್ವರ ದೇವಾಲಯವನ್ನು ೧೨ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಮುಖಮಂಟಪ ವಿಶಾಲವಾಗಿದ್ದು ೨೦ ಕಲ್ಲಿನ ಕಂಬಗಳನ್ನು ಹೊಂದಿದೆ. ಮುಖಮಂಟಪ ದಾಟಿದರೆ ನವರಂಗ ನಂತರ ಅಂತರಾಳ ಮತ್ತು ಗರ್ಭಗುಡಿ. ಈ ದೇವಾಲಯಕ್ಕೆ ೨ ದ್ವಾರಗಳಿವೆ.


ಲಕ್ಕುಂಡಿಯ ಪ್ರಸಿದ್ಧ ದೇವಾಲಯವೆಂದರೆ ಕಾಶಿ ವಿಶ್ವೇಶ್ವರ ದೇವಾಲಯ. ಭವ್ಯವಾಗಿ ಕಾಣುವ ಈ ದೇವಾಲಯ ಕಣ್ಣು ಕುಕ್ಕುವಷ್ಟು ಸುಂದರವಾಗಿದೆ. ಶಿಲ್ಪಕಲೆಯನ್ನು ಹೊಗಳಿದಷ್ಟು ಕಡಿಮೆ. ವಿಶಿಷ್ಟ ಶೈಲಿಯಲ್ಲಿ ನಿರ್ಮಿಸಲಾಗಿರುವ ಅದ್ಭುತ ಶಿಲ್ಪಕಲೆಯ ಸುಂದರ ದೇವಾಲಯ.


ನಂತರ ನಾವು ತೆರಳಿದ್ದು ಊರಿನ ಮಧ್ಯದಲ್ಲಿರುವ ವಿರೂಪಾಕ್ಷ ದೇವಾಲಯಕ್ಕೆ. ದೇವಾಲಯದ ಅತೀ ಹತ್ತಿರದವರೆಗೆ ಅಂದರೆ ಕೇವಲ ಒಂದು ಅಡಿ ಸಮೀಪದವರೆಗೆ ವಾಹನಗಳು ಓಡಾಡುತ್ತವೆ. ಮುಂಭಾಗದಲ್ಲಿನ ಮುಖಮಂಟಪ ಬಿದ್ದುಹೋಗಿದ್ದು ತಳಪಾಯ ಮಾತ್ರ ಉಳಿದಿದೆ. ಈ ತಳಪಾಯದ ಮೇಲೆ ಕುಳಿತು ಹರಟೆ ಹೊಡೆಯುತ್ತಾ ಕಾಲ ಕಳೆಯುತ್ತಾರೆ ಲಕ್ಕುಂಡಿಯ ಜನರು. ಮಕ್ಕಳಿಗಂತೂ ಇದೊಂದು ಕಣ್ಣಾಮುಚ್ಚಾಲೆ ಆಟ ಆಡಲು ಯೋಗ್ಯವಾದ ಸ್ಥಳವಾಗಿದೆ. ಮುತ್ತಪ್ಪನವರಲ್ಲಿ ಈ ಬಗ್ಗೆ ಕೇಳಿದರೆ, 'ಈ ದೇವಾಲಯವನ್ನು ಸರಕಾರ ತನ್ನ ವಶಕ್ಕೆ ತೆಗೆದುಕೊಂಡಿಲ್ಲ' ಎಂಬ ನಿರ್ಲಿಪ್ತ ಉತ್ತರ ನೀಡಿದರು. ಅಲ್ಲೇ ಸಮೀಪದಲ್ಲಿ ರಸ್ತೆಯ ಮತ್ತೊಂದು ಬದಿಯಲ್ಲಿ ಮನೆಗಳ ಸಾಲುಗಳ ಹಿಂದೆ ಮರೆಯಾದಂತೆ ಕಾಣುತ್ತಿತ್ತು ಮಲ್ಲಿಕಾರ್ಜುನ ದೇವಾಲಯ. ಇದರ ಸ್ಥಿತಿಯೂ ವಿರೂಪಾಕ್ಷ ದೇವಾಲಯದಂತೇ!

ಕೊನೆಯದಾಗಿ ಭೇಟಿ ನೀಡಿದ್ದು ಕುಂಬಾರೇಶ್ವರ ದೇವಾಲಯಕ್ಕೆ. ಇದನ್ನು ಸರಕಾರ ತನ್ನ ವಶಕ್ಕೆ ಪಡೆದಿದೆ ಎನ್ನುತ್ತಾ ಮುತ್ತಪ್ಪ ನಮ್ಮನ್ನು ದೇವಾಲಯದ ಸಮೀಪ ಕರೆದೊಯ್ದರು. ದೇವಾಲಯಕ್ಕೆ ಎಷ್ಟು ಸಮೀಪವೋ ಅಷ್ಟು ಸಮೀಪದವರೆಗೆ ಮನೆ ಮಾಡಿಕೊಂಡಿದ್ದಾರೆ ಲಕ್ಕುಂಡಿಯ ಜನರು. ಈ ದೇವಸ್ಥಾನದ ಒಂದು ಹೊರಗೋಡೆಯೇ ಮನೆಯೊಂದರ ಒಳಗೋಡೆ! ದೇವಾಲಯದ ಬಾಗಿಲಿನ ಎಡಕ್ಕೆ ಆಡೊಂದನ್ನು ಕಟ್ಟಲಾಗಿದ್ದರೆ ಬಲಕ್ಕೆ ದನವೊಂದು ಮತ್ತದರ ಕರುವನ್ನು ಕಟ್ಟಲಾಗಿತ್ತು. ಅಲ್ಲೇ ಸಮೀಪ ಅವುಗಳ ಆಹಾರವಾಗಿ ಬೈಹುಲ್ಲು. ಸೆಗಣಿ ರಾಶಿ. ಸರಕಾರ ತನ್ನ ವಶಕ್ಕೆ ಪಡೆದ ಕುಂಬಾರೇಶ್ವರ ದೇವಾಲಯದ ಪರಿಸ್ಥಿತಿ, ಸರಕಾರದ ವಶದಲ್ಲಿರದ ವಿರೂಪಾಕ್ಷ ದೇವಾಲಯಗಿಂತ ಕಡೆ. ಯಾರ ವಶದಲ್ಲಿದ್ದು ಏನು ಪ್ರಯೋಜನ?



ಮಾಹಿತಿ: ಮಹೇಶ ಮನಯ್ಯನವರಮಠ

7 ಕಾಮೆಂಟ್‌ಗಳು:

Aravind GJ ಹೇಳಿದರು...

ಲಕ್ಕುಂಡಿಯ ಬಗ್ಗೆ ನಿಮ್ಮ ವಿವರಣೆ ಸೊಗಸಾಗಿ ಬಂದಿದೆ. ಚಿತ್ರಗಳು ತುಂಬ ಚೆನ್ನಾಗಿವೆ.

Shiv ಹೇಳಿದರು...

ರಾಜೇಶ್,
ಲಕ್ಕುಂಡಿಯ ದೇಗುಲಗಳ ಸಮಗ್ರ ಪರಿಚಯ ಮಾಡಿದ್ದಕ್ಕೆ ವಂದನೆಗಳು. ಅಂದಾಗೆ ಒತ್ತುವರಿ ಇಲ್ಲದೇ ಇರೋ ದೇವಾಲಯಗಳೇ ಇಲ್ಲವೇನೋ..

ಅನಾಮಧೇಯ ಹೇಳಿದರು...

ರಾಜೇಶ ನಾಯ್ಕರೆ, ಧಾರವಾಡ ಜಿಲ್ಲೆಯ ಶಿಲ್ಪಕಲೆಯ ಬಗ್ಗೆ ಇಷ್ಟು ವಿವರವಾಗಿ ಯಾರಾದರೂ ಬರೆದಿರುವದು ವಿರಳ, ತುಂಬಾ ಅಭಿನಂದನೆಗಳು ಮತ್ತು -ಧನ್ಯವಾದಗಳು. ನಾನು ನೀವು ಬರೆದಿರುವ ಎಲ್ಲಾ ದೇವಾಲಯಗಳನ್ನು ನೋಡಿದ್ದೆನೆ ಆದ್ರೆ ಯಾವುದೇ ದೇವಾಲಯಗಳ ಚಿತ್ರಗಳು ಇಲ್ಲ ಅವುಗಳ ಬಗ್ಗೆ ಬರೆದಿಲ್ಲ ಕೂಡ. ನಿಮ್ಮ ದಾರಿಯಲ್ಲಿ ಲಕ್ಷ್ಮೇಶ್ವರ ಬಂದಿದೆ ಎಂದರೆ ಅಲ್ಲಿ ದೇವಾಲಯ ನೋಡಿದ್ರೋ ಹೆಂಗ? ಮತ್ತ ಹಾವೇರಿಯಲ್ಲಿನ ಬಿಂದಗಿ ಸಿದ್ದಪ್ಪನ ದೇವಸ್ಥಾನಕ್ಕೆ ಹೋಗಿದ್ರೆನು? ಧಾರವಾಡ ಜಿಲ್ಲೆಯಲ್ಲಿ ಮೂಲೆಯಲ್ಲಿ ಅನೇಕ ಇಂತಹ ಅಪರೂಪದ ದೇವಸ್ಥಾನಗಳಿವೆ, ಅವುಗಳ ಬಗ್ಗೆ ಅನೇಕ ಜನರಿಗೆ ಪರಿಚಯವಿಲ್ಲ. ನಿಮ್ಮ ಬರಹ ಓದಿದ ಮೇಲೆ ನಾನು ಕೂಡ ಬೇರೆ ಕೆಲವು ದೇವಾಲಯಗಳ ಬಗ್ಗೆ ಚಿತ್ರ ಸಹಿತ ಮಾಹಿತಿ ನೀಡುತ್ತೇನೆ. ಹಿಂಗ ದೇವಸ್ಥಾನಗಳ ಬಗ್ಗೆ ಬೇರೆ ಸೋಜಿಗದ ಸ್ಥಳಗಳ ಬರಕೋತ ಇರ್ರಿ. ಧನ್ಯವಾದಗಳು-ಸಂಜೀವ ಕುಲಕರ್ಣಿ

ರಾಜೇಶ್ ನಾಯ್ಕ ಹೇಳಿದರು...

ಅರವಿಂದ್, ಶಿವ್
ಧನ್ಯವಾದಗಳು. ಒತ್ತುವರಿ ಆಗೋ ಮೊದಲೇ ಸಂಬಂಧಪಟ್ಟ ಇಲಾಖೆ ಎಚ್ಚೆತ್ತರೆ ಸರಿ. ಇಲವಾದಲ್ಲಿ ಒತ್ತುವರಿಯೇ ಗತಿ.

ಸಂಜೀವ್,
ಧನ್ಯವಾದಗಳು.
ಆ ದಿನ ಲಕ್ಷ್ಮೇಶ್ವರಕ್ಕೆ ಹೋಗಿದ್ದೇನೋ ನಿಜ. ಗುತ್ತಲದಿಂದ ಹಿಂತಿರುಗುವಾಗ ಲಕ್ಷ್ಮೇಶ್ವರದ ದೇವಸ್ಥಾನ ನೋಡಿ ಕುಂದಗೋಳ ದಾರಿಯಲ್ಲಿ ಹುಬ್ಬಳ್ಳಿಗೆ ಹಿಂದಿರುಗಬೇಕೆಂದಿದ್ದೆ. ಆದರೆ ಹರಳಹಳ್ಳಿ ಸೋಮೇಶ್ವರ ದೇವಸ್ಥಾನ ನೋಡಿ ಗುತ್ತಲ ತಲುಪಿದಾಗಲೇ ಸೂರ್ಯ ಕೆಂಪು ರಂಗಿಗೆ ತಿರುಗಿದ್ದ. ಹಾಗಾಗಿ ಲಕ್ಷ್ಮೇಶ್ವರ ದೇವಸ್ಥಾನ ಕೈಬಿಡಬೇಕಾಯಿತು. ಅಷ್ಟೇ ಅಲ್ಲದೆ ಗುತ್ತಲ ಸಮೀಪದ ಚೌಡಯ್ಯದಾನಪುರದಲ್ಲಿರುವ ಶಿವ ದೇವಸ್ಥಾನವನ್ನೂ ಕತ್ತಲಾಗುತ್ತಿದ್ದರಿಂದ ನೋಡಲಾಗಲಿಲ್ಲ. ಹಾವೇರಿಯ ದೇವಸ್ಥಾನದ ಬಗ್ಗೆ ಗೊತ್ತಿದ್ದರೂ ಅದಾಗಲೇ ಸಮಯ ೭ ಆಗಿದ್ದರಿಂದ ಹುಬ್ಬಳ್ಳಿ ದಾರಿ ಹಿಡಿದೆ.

ಅನಾಮಧೇಯ ಹೇಳಿದರು...

Very informative article about Lakkundi. Thanks a lot!
Dr.D.M.Sagar
Canada

ರಾಜೇಶ್ ನಾಯ್ಕ ಹೇಳಿದರು...

ಸಾಗರ್,
ಧನ್ಯವಾದಗಳು.

ಅನಾಮಧೇಯ ಹೇಳಿದರು...

Nieevu bareva reethi tumba tumba muddaagide..padagala jodane adbhutavaagide…

Nanna putaani blog

www.navilagari.wordpress.com

idakke nimma blaag rolnalli swalpa jaaga kodi:)

Nimma somu