ಮಂಗಳವಾರ, ಮಾರ್ಚ್ 13, 2012

ಕಲ್ಲೇಶ್ವರ ದೇವಾಲಯ - ಅರಳಗುಪ್ಪೆ


ಅರಳಗುಪ್ಪೆಯಲ್ಲಿ ಕೆರೆಯ ತಟದಲ್ಲಿ ನೆಲೆಗೊಂಡಿದ್ದಾನೆ ಕಲ್ಲೇಶ್ವರ. ಶಾಸನಗಳಲ್ಲಿ ಈ ಊರನ್ನು ’ಅಳರಿಗುಪ್ಪೆ’ ಎಂದು ಕರೆಯಲಾಗಿದೆ. ಅಷ್ಟ ದೇವಾಲಯಗಳ ಸಮುಚ್ಚಯವಿರುವ ವಿಶಾಲ ಪ್ರಾಂಗಣ ಮೊದಲ ನೋಟಕ್ಕೆ ಅಷ್ಟೇನು ಆಕರ್ಷಕವಾಗಿ ಕಾಣಬರುವುದಿಲ್ಲ. ಇರುವ ಎಲ್ಲಾ ದೇವಾಲಯಗಳಿಗೂ ಬಣ್ಣ ಬಳಿಯಲಾಗಿದೆ. ಕಲ್ಲೇಶ್ವರನ ಮತ್ತು ಉಮಾಮಹೇಶ್ವರ ಗುಡಿಗಳಿಗೆ ಪ್ರಾಮುಖ್ಯತೆ ನೀಡಿ ಹಳದಿ ಬಣ್ಣ ಬಳಿದರೆ ಉಳಿದವುಗಳಿಗೆ ಬಿಳಿ.


ಕಲ್ಲೇಶ್ವರ ದೇವಾಲಯಕ್ಕೆ ಬೀಗ ಜಡಿಯಲಾಗಿತ್ತು. ಅಲ್ಲೇ ಇದ್ದ ಅಜ್ಜಿಯೊಬ್ಬಳನ್ನು ಬೀಗದ ಬಗ್ಗೆ ವಿಚಾರಿಸಿದಾಗ ಆಕೆ ಏನನ್ನೂ ಮಾತನಾಡದೆ ಎತ್ತಲೋ ಹೋದಳು. ’ಏನಪ್ಪಾ ಸೊಕ್ಕು ಈ ಮುದುಕಿಗೆ’ ಎಂದು ಮನದಲ್ಲೇ ಆಕೆಗೆ ಹಿಡಿಶಾಪ ಹಾಕುತ್ತಾ ದೇವಾಲಯದ ದ್ವಾರದ ಚಿತ್ರಗಳನ್ನು ತೆಗೆಯುತ್ತಿರಬೇಕಾದರೆ ಆ ಅಜ್ಜಿ ಒಬ್ಬರನ್ನು ಕರಕೊಂಡು ಬಂದಳು! ಇವರು ದೇವಾಲಯದ ಜವಾಬ್ದಾರಿಯನ್ನು ಹೊತ್ತಿರುವ ವ್ಯಕ್ತಿಯಾಗಿದ್ದು, ದೇವಾಲಯದ ಬಾಗಿಲಿನ ಬೀಗ ತೆಗೆದರು. ಅಜ್ಜಿಗೆ ಧನ್ಯವಾದ ಹೇಳಿ, ಮನದಲ್ಲೇ ಕ್ಷಮೆಯನ್ನೂ ಯಾಚಿಸಿದೆ.


ನೊಳಂಬ ರಾಜರಿಂದ ಒಂಬತ್ತನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಈ ದೇವಾಲಯವು ಏಕಕೂಟವಾಗಿದ್ದು ನವರಂಗ, ದ್ವಾರರಹಿತ ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿದೆ. ಗರ್ಭಗುಡಿಯ ದ್ವಾರವು ನಾಲ್ಕು ತೋಳುಗಳದ್ದಾಗಿದ್ದು ಒಳಗೆ ಕರಿಕಲ್ಲಿನ ಆಕರ್ಷಕ ಶಿವಲಿಂಗವಿದೆ. ಈ ದೇವಾಲಯದಲ್ಲಿ ದಿನಾಲೂ ಪೂಜೆ ಸಲ್ಲಿಸಲಾಗುತ್ತದೆ. ದೇವಾಲಯವನ್ನು ಸಂಪೂರ್ಣವಾಗಿ ಆಧುನೀಕರಣಗೊಳಿಸಲಾಗಿದೆ. ದೇವಾಲಯದ ಎರಡು ಪ್ರಮುಖ ಆಕರ್ಷಣೆಗಳೆಂದರೆ ನವರಂಗದ ಛಾವಣಿಯಲ್ಲಿರುವ ಅದ್ಭುತ ಕೆತ್ತನೆಗಳು ಮತ್ತು ದೇವಾಲಯದ ದ್ವಾರದಲ್ಲಿರುವ ಕೆತ್ತನೆಗಳು.


ದೇವಾಲಯದ ದ್ವಾರವು ನಾಲ್ಕು ತೋಳುಗಳದ್ದಾಗಿದ್ದು ವಾದ್ಯಗಾರರು, ನರ್ತಕಿಯರು ಮತ್ತು ದ್ವಾರಪಾಲಕರನ್ನು ಹೊಂದಿದೆ. ಮೇಲ್ಗಡೆ ಗಜಲಕ್ಷ್ಮೀಯ ಕೆತ್ತನೆಯಿದೆ. ಗಜಲಕ್ಷ್ಮೀಯ ಕೆತ್ತನೆಯ ಮೇಲಿನ ಸಾಲಿನಲ್ಲಿ ೫ ಕುಬ್ಜರು ಕುಳಿತಿರುವಂತೆ ಕೆತ್ತಲಾಗಿದೆ. ಅವರು ಯಾರು, ಯಾಕೆ ಹಾಗೆ ಕೆತ್ತಲಾಗಿದೆ, ಮಹತ್ವ ಏನು ಎಂದು ತಿಳಿಯಲಿಲ್ಲ. ಗಂಧರ್ವರು ಆಗಿರಬಹುದು.


ನವರಂಗದ ಛಾವಣಿಯಲ್ಲಿ ಸುತ್ತಲೂ ಅಷ್ಟದಿಕ್ಪಾಲಕರನ್ನು ತಮ್ಮ ತಮ್ಮ ವಾಹನಗಳಲ್ಲಿ ಆಸೀನರಾಗಿರುವಂತೆ ಕೆತ್ತಲಾಗಿದ್ದು, ನಟ್ಟನಡುವೆ ತಾಂಡವೇಶ್ವರನ ಮೂರ್ತಿಯನ್ನು ಕೆತ್ತಲಾಗಿದೆ. ಸಂಪೂರ್ಣ ಆಭರಣಧಾರಿಯಾಗಿ ತಾಂಡವ ನೃತ್ಯದಲ್ಲಿ ತಲ್ಲೀನನಾಗಿರುವ ಶಿವನ ಸುತ್ತಲೂ ತಾಳ, ಕೊಳಲು ಮತ್ತು ಮೂರು ಮಡಕೆಗಳಂತಹ ವಾದ್ಯವೊಂದನ್ನು ನುಡಿಸುತ್ತಿರುವವರ ಕೆತ್ತನೆಯಿದೆ. 


ಇವೆಲ್ಲಕ್ಕಿಂತಲೂ ನನ್ನನ್ನು ಆಕರ್ಷಿಸಿದ್ದು ಹಾರಾಡುವ ಗಂಧರ್ವರ ಕೆತ್ತನೆಗಳು. ತಾಂಡವೇಶ್ವರನ ಕೆತ್ತನೆಯಿರುವ ಚೌಕದ ನಾಲ್ಕು ಮೂಲೆಗಳಲ್ಲೂ ಹಾರವನ್ನು ಹಿಡಿದು ಶಿವನತ್ತ ಮುಖ ಮಾಡಿರುವ ಗಂಧರ್ವರನ್ನು ಕೆತ್ತಿರುವ ರೀತಿ ಅದ್ಭುತ. ನೋಡಿದಷ್ಟು ವಿಸ್ಮಯಗೊಳಿಸುವ ಕೆತ್ತನೆ.


ದೇವಾಲಯದ ಹೊರಗೆ ನಂದಿಯ ಸುಂದರ ಮೂರ್ತಿಯಿದೆ. ಕಲ್ಲೇಶ್ವರನ ಸನ್ನಿಧಿಯ ಅಕ್ಕಪಕ್ಕದಲ್ಲಿ ಗಣೇಶ ಮತ್ತು ಸುಬ್ರಹ್ಮಣ್ಯರ ದೇವಾಲಯಗಳಿವೆ.


ನೇರ ಎದುರಿಗೆ ಉಮಾಮಹೇಶ್ವರನ ದೇವಾಲಯವಿದೆ. ಎತ್ತರದ ಪೀಠದ ಮೇಲಿರುವ ಉಮಾಮಹೇಶ್ವರನ ವಿಗ್ರಹ ಆಕರ್ಷಕವಾಗಿದ್ದು ಇಬ್ಬರು ಹಾರುವ ಗಂಧರ್ವರನ್ನೊಳಗೊಂಡ ಪ್ರಭಾವಳಿ ಕೆತ್ತನೆಯನ್ನು ಹೊಂದಿದೆ. ಪೀಠದ ತಳಭಾಗದಲ್ಲಿ ನಂದಿಯ ಕೆತ್ತನೆಯಿದೆ.


ಗಂಗರ ಸಮಯದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲ್ಪಡುವ ಇನ್ನೂ ನಾಲ್ಕು ಸಣ್ಣ ಶಿವ ದೇವಾಲಯಗಳು ಪ್ರಾಂಗಣದೊಳಗೇ ಇವೆ. ಕೆರೆಯ ತಟದಲ್ಲೇ ಸುಂದರ ಮಂಟಪವೊಂದಿದೆ.

3 ಕಾಮೆಂಟ್‌ಗಳು:

Teamgsquare ಹೇಳಿದರು...

Ceiling carving is just out of this world ...

Ashok ಹೇಳಿದರು...

Beautiful limited Carvings. Now well maintained. I remember a big pond outside the temple.

ರಾಜೇಶ್ ನಾಯ್ಕ ಹೇಳಿದರು...

ಧೀರಜ್ಅಮೃತಾ, ಅಶೋಕ್,
ಧನ್ಯವಾದ.